ಅಭಿನಯಗೀತೆ
	
ಹದಿನೆಂಟನೆಯ ಮತ್ತು ಹತ್ತೊಂಬತ್ತನೆಯ ಶತಮಾನಗಳಲ್ಲಿ ರಷ್ಯದ ರೈತಜನದಲ್ಲಿ ಅಭಿನಯ ಹಾಡಿಕೆ ಎರಡನ್ನೂ ಸೇರಿಸಿ ಕಥೆ ಹೇಳುವುದು ವಾಡಿಕೆಯಾಗಿತ್ತು. ಹೊರತೋರಬೇಕಾದ ಭಾವಕ್ಕೆ ಹೆಚ್ಚು ಉತ್ಸಾಹವನ್ನೂ ಕಾಂತಿಯನ್ನೂ ತುಂಬುವುದೇ ಗಾಯನದ ಉದ್ದೇಶ; ಕಥಾವ್ಯಕ್ತಿಗಳ ಸಂಭಾಷಣೆಯನ್ನೂ ಕಾರ್ಯಾವಳಿಯನ್ನೂ ನಾಟಕೀಯತೆಯ ಮೂಲಕ ಹೆಚ್ಚು ಸ್ಪಷ್ಟಗೊಳಿಸುವುದೇ ಅಭಿನಯದ ಉದ್ದೇಶ. ಸಂಗೀತ ಅಭಿನಯವೆರಡೂ ಸಹಾಯಕ; ಕಥಾನಿರೂಪಣೆ ಮುಖ್ಯಾಂಶ.
	
ಇತ್ತೀಚೆಗೆ ಅಭಿನಯಗೀತೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಒಂದು ಉಪಯುಕ್ತ ಸಲಕರಣೆಯಾಗಿದೆ. ಅದಕ್ಕೆ ಹಲವು ಬಗೆಗಳುಂಟು. ಆದರೂ ಕೆಲವು ಲಕ್ಷಣಗಳು ಅವೆಲ್ಲಕ್ಕೂ ಸಮಾನ. 1. ನೇರವೂ ಸುಲಭವೂ ಆದ ರೀತಿ, ಇದರಲ್ಲಿ ಬಲು ವಿವರಗಳಿಗೂ ಸಂಕೀರ್ಣತೆಗೂ ಆಸ್ಪದವಿಲ್ಲ. 2. ಸರಳವಾಗಿ ಬೇಗ ನಡೆದು ಮುಗಿಯುವ ಚಿಕ್ಕ ಪ್ರಸಂಗ. 3. ಕೇವಲ ಇಂಪಿಗೋಸ್ಕರ ಗಾಯನ. 4. ಹಿತಮಿತವಾದ ಅಭಿನಯ; ಅಬ್ಬರಕ್ಕಾಗಲಿ ವಿಳಂಬಕ್ಕಾಗಲಿ ಜಾಗವಿಲ್ಲ. 5. ಏಕನಾದ ಕೂಡದು; ತಕ್ಕ ಮಟ್ಟಿಗೆ ವೈವಿಧ್ಯವಿರಬೇಕು. 6. ಮಕ್ಕಳ ಎಟುಕಣಿಗೆ ಯಾವುದೂ ಮೀರಿರಬಾರದು.			  				
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ